ಪ್ರಭೇದೋದ್ಭವ -
ಅಸ್ತಿತ್ವದಲ್ಲಿರುವ ಪ್ರಭೇದವೊಂದರಿಂದ ಹೊಸ ಪ್ರಭೇದ ಉದ್ಭವಿಸುವುದು (ಆರಿಜಿನ್ ಆಫ್ ಸ್ಪೀಶೀಸ್). ಜೀವವಿಕಾಸದಲ್ಲಿ ಪ್ರಭೇದೋದ್ಭವ ಬಹು ಪ್ರಮುಖವಾದ ವಿಷಯ. ಬ್ರಿಟಿಷ್ ವಿಜ್ಞಾನಿ ಚಾಲ್ರ್ಸ್ ಡಾರ್ವಿನ್ 1859ರಲ್ಲಿ ನೈಸರ್ಗಿಕ ಆಯ್ಕೆಯಿಂದ ಪ್ರಭೇದೋದ್ಭವ ಎಂಬ ಪುಸ್ತಕವನ್ನು ಪ್ರಕಟಿಸಿದ. ಹೊಸ ಹೊಸ ಪ್ರಭೇದಗಳು ಆಗಾಗ ಉದ್ಭವಿಸುತ್ತಿರುತ್ತವೆ. ನಶಿಸಿಹೋಗುತ್ತಿರುತ್ತವೆ ಎಂದು ಈ ಪುಸ್ತಕದಲ್ಲಿ ಹೇಳಲಾಗಿದೆ. ಪ್ರಭೇದೋದ್ಭವಕ್ಕೆ ಈ ಕೆಳಗಿನ ಕಾರಣಗಳನ್ನು ಡಾರ್ವಿನ್ ಕೊಟ್ಟಿದ್ದಾನೆ. 

1 ಅತಿ ಉತ್ಪಾದನೆ: ಯಾವುದೇ ಪ್ರಾಣಿ ಅಥವಾ ಸಸ್ಯ ವಾಸ್ತವವಾಗಿ ಸಂತತಿಯನ್ನು ಉತ್ಪಾದಿಸುವಾಗ ಬದುಕುಳಿಯುವ ಸಂಖ್ಯೆಗಿಂತ ಹೆಚ್ಚು ಸಂತತಿಯನ್ನು ಉತ್ಪಾದಿಸುತ್ತದೆ. ಉದಾಹರಣೆಗೆ ಒಂದು ಮೀನು ವರ್ಷಕ್ಕೆ 40,000ಕ್ಕಿಂತ ಹೆಚ್ಚು ಮೊಟ್ಟೆಗಳನ್ನಿಡುತ್ತದೆ. ಅವುಗಳಲ್ಲಿ ಕೆಲವು ಮೊಟ್ಟೆಗಳು ಯಾಂತ್ರಿಕವಾಗಿ ನಶಿಸಿ ಹೋದರೆ ಇನ್ನು ಕೆಲವು ಇತರ ಪ್ರಾಣಿಗಳಿಗೆ ಆಹಾರವಾಗುತ್ತವೆ. ಉಳಿಯುವುವು ಕೇವಲ ಕೆಲವೇ. ಜಂತುಹುಳು ದಿನಕ್ಕೆ ಲಕ್ಷಾಂತರ ಮೊಟ್ಟೆಗಳನ್ನಿಡುತ್ತದೆ. ಆದರೆ ಇವುಗಳಲ್ಲಿ ಕೇವಲ ಕೆಲವು ಮಾತ್ರ ಆತಿಥೇಯಗಳನ್ನು ಸೇರಬಹುದು. ಎಲ್ಲ ಮೊಟ್ಟೆಗಳೂ ಒಡೆದು ಮರಿಗಳಾಗಿ ಬೆಳೆದಿದ್ದರೆ, ಇಡೀ ಭೂಮಂಡಲ ಕೇವಲ ಒಂದೇ ಪ್ರಭೇದವನ್ನು ಒಳಗೊಂಡಿರಬೇಕಿತ್ತು. ಹೀಗೆಯೇ ಅನೇಕ ಉದಾಹರಣೆಗಳನ್ನು ಕೊಡಬಹುದು. ಒಂದು ಹೆಣ್ಣು ಆನೆಯ ಆಯಸ್ಸು 100 ವರ್ಷ ಎಂದಿಟ್ಟುಕೊಂಡರೆ, ಅದು ತನ್ನ 30 ರಿಂದ 70ನೆಯ ವರ್ಷದವರೆಗೆ ಮರಿಹಾಕುತ್ತದೆ. ಅಂದರೆ ಅದು 40 ವರ್ಷ ಕಾಲ ಮರಿಹಾಕಬಲ್ಲುದು. ಒಮ್ಮೆ ಗರ್ಭಧರಿಸಿ ಮರಿಹಾಕಲು ಆನೆಗಳಿಗೆ 18 ತಿಂಗಳು ಬೇಕಾಗುತ್ತದೆ. ಅಥವಾ ಎರಡು ವರ್ಷಗಳಿಗೊಂದರಂತೆ 40 ವರ್ಷಗಳಲ್ಲಿ ಸುಮಾರು 20 ಮರಿ ಆನೆಗಳು ಹುಟ್ಟುತ್ತವೆ ಎಂದಾಯಿತು. ಒಂದು ಹೆಣ್ಣು ಮತ್ತು ಒಂದು ಗಂಡು ಪ್ರಬುದ್ಧ ಆನೆಗಳಿಂದ ಆನೆಯ ಪ್ರಭೇದ ಪ್ರಾರಂಭವಾಯಿತು ಎಂದಿಟ್ಟುಕೊಳ್ಳೋಣ. 30 ವರ್ಷಗಳಲ್ಲಿ 15 + 2 = 17 ಆನೆಗಳು ಇರಬೇಕು. 30ನೆಯ ವರ್ಷದಿಂದ ಮರಿ ಆನೆಗಳೂ ಪ್ರಜನನಕ್ರಿಯೆಯಲ್ಲಿ ತೊಡಗುವುದರಿಂದ 60ನೆಯ ವರ್ಷದ ಹೊತ್ತಿಗೆ ಸುಮಾರು 125 ಆನೆಗಳಿರುವಂತಾಗುತ್ತದೆ. ಈ ರೀತಿ ಇವುಗಳ ಸಂಖ್ಯೆ ವೃದ್ಧಿಯಾಗುತ್ತ ಹೋದರೆ 750 ವರ್ಷಗಳಲ್ಲಿ ಹುಟ್ಟುವ ಆನೆಗಳನ್ನೆಲ್ಲ ಸಾಲಾಗಿ ನಿಲ್ಲಿಸಿದರೆ ಭೂಮಿಗೂ ಸೂರ್ಯನಿಗೂ ಮಧ್ಯೆ ಆನೆಗಳ ಸೇತುವೆಯನ್ನೇ ನಿರ್ಮಿಸಬಹುದು. ಆದರೆ ವಾಸ್ತವವಾಗಿ ಆನೆಗಳ ಸಂಖ್ಯೆ ಹೀಗೆ ದ್ವಿಗುಣವಾಗುವುದಿಲ್ಲ ಎನ್ನುವ ಸಂಗತಿ ಬೇರೆ.

2 ಬದುಕುಳಿಯುವಿಕೆಯ ಹೋರಾಟ ಮತ್ತು ಸ್ಪರ್ಧೆ: ಅತಿ ಉತ್ಪಾದನೆಯಿಂದ ಒಂದೇ ಪ್ರಭೇದದ ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಆದರೆ ಇವು ವಾಸಿಸುವ ಪರಿಸರದಲ್ಲಿ ಸ್ಥಳಾವಕಾಶದ ಅಥವಾ ಆಹಾರದ ಹೆಚ್ಚಳವಾಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಒಂದೇ ಪ್ರಭೇದದ ಜೀವಿಗಳಲ್ಲಿ ಆಹಾರ ಮತ್ತು ಸ್ಥಳಾವಕಾಶಕ್ಕಾಗಿ ತೀವ್ರಸ್ಪರ್ಧೆ ಪ್ರಾರಂಭವಾಗುತ್ತದೆ. ಈ ಸ್ಪರ್ಧೆಗೆ ಬದುಕಿನ ಹೋರಾಟ ಎಂದು ಹೆಸರು. ಇದು ಎಷ್ಟು ತೀವ್ರ ಎಂದರೆ ಕೆಲವು ಪ್ರಭೇದಗಳಲ್ಲಿ ಬಲಯುತ ಪ್ರಾಣಿ ಬಲಹೀನವಾದವನ್ನು ಕೊಲ್ಲುವುವಕ್ಕೂ ಹಿಂದೆಗೆಯುವುದಿಲ್ಲ. ವಿಕಾಸದ ಆದಿಯಿಂದ ಈ ತೆರನ ಹೋರಾಟ ಮತ್ತು ಸ್ಪರ್ಧೆ ವಿವಿಧ ಹಂತಗಳಲ್ಲಿ ನಡೆಯುತ್ತಲೇ ಬಂದಿದೆ. ಎರಡು ಗುಂಪುಗಳ ನಡುವೆ ಎರಡು ಪ್ರಭೇದಗಳ ನಡುವೆ, ಒಂದೇ ಪ್ರಭೇದದ ಎರಡು ಜೀವಿಗಳ ನಡುವೆ ಈ ಹೋರಾಟ ನಡೆಯುತ್ತಿದೆ. 

3 ವೈವಿಧ್ಯ: ಡಾರ್ವಿನ್ನನ ಪ್ರಕಾರ ವಿವಿಧ ಪ್ರಭೇದಗಳನ್ನು ಅವುಗಳಲ್ಲಿರುವ ವ್ಯತ್ಯಾಸ ಇಲ್ಲವೇ ಭಿನ್ನತೆಗಳಿಂದ ಗುರುತಿಸಬಹುದು. ಹಾಗೆಯೇ ಒಂದೇ ಪ್ರಭೇದದ ಜೀವಿಗಳಲ್ಲಿ ಕೂಡ ಸ್ವಲ್ಪಮಟ್ಟಿನ ವ್ಯತ್ಯಾಸವುಂಟು. ಇದೇ ವೈವಿಧ್ಯ. ಇದು ಅನುವಂಶೀಯ ಗುಣ. ಹಾಗೂ ಜೀವಿಗಳ ಸಾಮಾನ್ಯ ನಿಯಮ. ಉದಾಹರಣೆಗೆ ಶಾಲೆಯ ಒಂದು ತರಗತಿಯ ಮಕ್ಕಳ ಸರಾಸರಿ ಎತ್ತರವನ್ನು ತೆಗೆದುಕೊಂಡರೆ ನೂರರಲ್ಲಿ ಒಂದೋ ಎರಡೋ ಮಕ್ಕಳು ಮಾತ್ರ ಸರಾಸರಿ ಎತ್ತರದವರು. ಉಳಿದವರ ಎತ್ತರ ವಿಭಿನ್ನ.

4 ಬದುಕುವ ಅರ್ಹತೆ: ಬದುಕಿನ ಹೋರಾಟದಲ್ಲಿ ಅತ್ಯುತ್ತಮ ವೈವಿಧ್ಯವನ್ನು ಪಡೆದಿರುವ ಜೀವಿಗಳು ಮಾತ್ರ ಉಳಿಯುತ್ತವೆ. ಉಳಿದವು ಅಳಿಯುತ್ತವೆ. ವೈವಿಧ್ಯದ ತರತಮಗಳನ್ನು ನಿಸರ್ಗ ನಿರ್ಧರಿಸುತ್ತದೆ. ಉತ್ತಮ ವೈವಿಧ್ಯವನ್ನು ತೋರುವ ಜೀವಿಗಳು ಬದಲಾಗುವ ಪರಿಸರಕ್ಕೆ ಸುಲಭವಾಗಿ ಹೊಂದಿಕೊಳ್ಳುವುದೇ ಇದಕ್ಕೆ ಕಾರಣ. ಈ ಹೊಂದಾಣಿಕೆಗಳನ್ನು ತೋರುವ ಪ್ರಾಣಿ ಅಥವಾ ಸಸ್ಯ ಉಳಿದ ಜೀವಿಗಳ ಮೇಲೆ ವಿಕ್ರಮವನ್ನು ಸಾಧಿಸುತ್ತದೆ. ಇಂಥ ಜೀವಿಗಳಿಗೆ ನಿಸರ್ಗದ ಆಯ್ಕೆಯಲ್ಲಿ ಬದುಕುವ ಅರ್ಹತೆಯನ್ನು ಪಡೆದವು ಎಂದು ಹೆಸರು. ಹೀಗೆ ನಿಸರ್ಗದ ಆಯ್ಕೆ ಭೂಮಿಯ ಮೇಲೆ ನಿರಂತರವಾಗಿ ನಡೆಯುತ್ತ ಬಂದಿದೆ. ಇದರ ಫಲವಾಗಿ ಹಲವಾರು ಹೊಸ ಪ್ರಭೇದಗಳು ಹುಟ್ಟಿಕೊಂಡವು; ಇವುಗಳಲ್ಲಿ ಕೆಲವು ವಿಕಸಿಸಿದುವು, ಇನ್ನು ಕೆಲವು ಪ್ರಭೇದಗಳು ನಶಿಸಿಹೋದವು. ಭೂಮಿಯ ಇತಿಹಾಸದ ಒಂದು ಕಾಲದಲ್ಲಿ ಅತ್ಯಂತ ವಿಕಸಿತಗೊಂಡ ಪ್ರಭೇದಗಳು ಇನ್ನೊಂದು ಕಾಲದಲ್ಲಿ ನಶಿಸಿ ಹೋದವು. ಹಲವಾರು ಹೊಸ ಮಾರ್ಪಡುಗಳೊಂದಿಗೆ ಹೊಸ ಪ್ರಭೇದಗಳಾಗಿ ಮಾರ್ಪಟ್ಟವು. ಇದು ಡಾರ್ವಿನ್ನನ ಪ್ರಭೇದೋದ್ಭವ ಪುಸ್ತಕದ ಸಾರಾಂಶ.

ಡಾರ್ವಿನ್ನನಿಗಿಂತ ಮುಂಚೆಯೇ ವಿಕಾಸ ಮತ್ತು ಪ್ರಭೇದೋದ್ಭವಕ್ಕೆ ಹಲವರು ಹಲವಾರು ಕಾರಣಗಳನ್ನು ಕೊಟ್ಟಿದ್ದರು. ಇವುಗಳಲ್ಲಿ ಲಮಾರ್ಕನ ಸಿದ್ಧಾಂತವೂ ಡಾರ್ವಿನ್ನನ ಸಿದ್ಧಾಂತದಂತೆಯೇ ಸ್ವಲ್ಪ ಮಹತ್ತ್ವ ಪಡೆದಿದೆ. ಲಮಾರ್ಕನ ಪ್ರಕಾರ ಯಾವುದೇ ಜೀವಿಯ ಒಂದು ಅಂಗ ನಿರಂತರವಾಗಿ ಬಳಕೆಯಾದಾಗ ಅದು ಬಲವಾಗಿ ಬೆಳೆದು ಆ ಜೀವಿಯ ಅನಂತರದ ಸಂತತಿಗಳಿಗೆ ಅನುವಂಶೀಯವಾಗಿ ಮುಂದುವರಿಯುತ್ತದೆ. ಲಮಾರ್ಕ್ ಜಿರಾಫೆಯ ಕತ್ತನ್ನು ಉದಾಹರಿಸಿದ್ದಾನೆ. ಜಿರಾಫೆಯ ಪೂರ್ವ ಜಗಳಿಗೆ ಚಿಕ್ಕ ಕತ್ತು ಇತ್ತು ಮತ್ತು ಅವು ಹುಲ್ಲನ್ನು ಮೇಯುತ್ತಿದ್ದವು. ಕಾಲಕ್ರಮೇಣ ಹುಲ್ಲು ಸುಲಭವಾಗಿ ಸಿಕ್ಕದೆ ಹೋದಾಗ ಅವು ಮರದ ಮೇಲಿನ ಎಲೆಗಳನ್ನು ತಿನ್ನತೊಡಗಿದವು. ನಿರಂತರವಾಗಿ ಕತ್ತನ್ನು ಮೇಲಕ್ಕೆತ್ತಿ ಎಲೆಗಳನ್ನು ತಿನ್ನುತ್ತಿದ್ದರಿಂದ ಜಿರಾಫೆಯ ಕತ್ತು ಉದ್ದವಾಗುತ್ತ ಹೋಗಿ ಎತ್ತರದಲ್ಲಿದ್ದ ಎಲೆಗಳನ್ನು ತಿನ್ನಲು ಸಹಾಯಕವಾಯಿತು. ಕ್ರಮೇಣ ಈ ಉದ್ದ ಕತ್ತು ಜಿರಾಫೆಯ ಸಂತಾನಗಳಲ್ಲಿ ಅನುವಂಶೀಯವಾಯಿತು.

ಜಿರಾಫೆಯ ಕತ್ತು ಉದ್ದವಾಗಿರುವುದಕ್ಕೆ ಡಾರ್ವಿನ್ನನ ಸಿದ್ಧಾಂತದ ಪ್ರಕಾರವೂ ವಿವರಣೆ ಕೊಡಬಹುದು. ಪ್ರಾಚೀನ ಕಾಲದಲ್ಲಿ ಜಿರಾಫೆಗಳು ಹುಲ್ಲನ್ನು ಮೇಯುತ್ತಿದ್ದು ಅವುಗಳ ಕತ್ತು ಚಿಕ್ಕದಾಗಿತ್ತು, ಜಿರಾಫೆಯ ಕತ್ತಿನ ಉದ್ದ ಅನುವಂಶೀಯವಾಗಿ ಬರುವ ಗುಣ. ಆದ್ದರಿಂದ ಅವುಗಳಲ್ಲಿ ವೈವಿಧ್ಯವೂ ಇತ್ತು. ನೆಲದಮೇಲೆ ಸಾಕಷ್ಟು ಹುಲ್ಲು ದೊರೆಯದಿದ್ದಾಗ ಜಿರಾಫೆಗಳು ತಮ್ಮ ಆಹಾರದಲ್ಲಿ ಬದಲಾವಣೆಯನ್ನು ಮಾಡಿಕೊಂಡು ಮರದ ಮೇಲಿನ ಎಲೆಗಳನ್ನು ತಿನ್ನಲಾರಂಭಿಸಿದುವು. ಉದ್ದ ಕತ್ತನ್ನು ಪಡೆದಿದ್ದ ಜಿರಾಫೆಗಳು ಹೆಚ್ಚು ಎತ್ತರದಲ್ಲಿರುವ ಎಲೆಗಳನ್ನು ತಿನ್ನಲು ಶಕ್ತವಾದವು. ಅದರಿಂದ ಉದ್ದಕತ್ತಿನ ಜಿರಾಫೆಗಳು ಬದುಕುವ ಅರ್ಹತೆಯನ್ನು ಪಡೆದು ನಿಸರ್ಗದ ಆಯ್ಕೆಯಲ್ಲಿ ಜಯಗಳಿಸಿದವು. ಉಳಿದವು ನಶಿಸಿಹೋದವು.

19ನೆಯ ಶತಮಾನದ ಅಂತ್ಯದಲ್ಲಿ ಡಾರ್ವಿನ್ನನ ಸಿದ್ಧಾಂತಕ್ಕೆ ಹೆಚ್ಚು ಪುರಸ್ಕಾರ ದೊರೆಯಿತು. ಆದರೆ 20ನೆಯ ಶತಮಾನದ ಪ್ರಾರಂಭದಲ್ಲಿ ಮೆಂಡಲನ ನಿಯಮಗಳ ಪುನರ್‍ಶೋಧನೆಯಾದ ಅನಂತರ 1930 ವರೆಗೆ ತಳಿಶಾಸ್ತ್ರದಲ್ಲಿ ಅನೇಕ ಮೂಲಭೂತ ಸಂಶೋಧನೆಗಳು ನಡೆದು 1930ರ ನಂತರ ವಿಕಾಸವಾದಕ್ಕೆ ತಳಿಶಾಸ್ತ್ರದ ಅಡಿಗಲ್ಲು ದೊರೆತು ಡಾರ್ವಿನ್ ಸಿದ್ಧಾಂತ ಮಾರ್ಪಾಟುಗೊಂಡು ನವಡಾರ್ವಿನ್‍ವಾದ ಎಂಬ ಹೆಸರಿನಿಂದ ಪ್ರಸಿದ್ಧಿ ಗಳಿಸಿತು.

ನವಡಾರ್ವಿನ್‍ವಾದದ ಪ್ರಕಾರ ಪ್ರಭೇದೋದ್ಭವಕ್ಕೆ ಮೂಲ ಕಾರಣ ಪ್ರಜನನ ಪ್ರತ್ಯೇಕತೆ: ಒಂದು ಪ್ರಭೇದದ ಒಂದೇ ಜೀವಿಯನ್ನಾಗಲೀ ಒಂದು ಸಂಪೂರ್ಣ ಪ್ರಭೇದವನ್ನಾಗಲೀ ನವಡಾರ್ವಿನ್‍ವಾದದ ಪ್ರತಿಪಾದಕರು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಒಂದು ನಿರ್ದಿಷ್ಟ ಕಾಲಮಾನದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ವಾಸಿಸುವ ಒಂದು ಪ್ರಭೇದದ ಅನೇಕ ಜೀವಿಗಳನ್ನು ಒಟ್ಟಿಗೆ ಗಣನೆಗೆ ತೆಗೆದುಕೊಳ್ಳುತ್ತಾರೆ. ಅವುಗಳನ್ನೆಲ್ಲ ಒಂದುಗೂಡಿಸಿ ಅವನ್ನು ಒಂದು ಮೆಂಡಲನ ಜನಸಂಖ್ಯೆ ಎಂದು ಹೆಸರಿಸುತ್ತಾರೆ. ಒಂದು ಮೆಂಡಲನ ಜನಸಂಖ್ಯೆ ಎಂದರೆ ನಿರ್ದಿಷ್ಟ ಭೂಭಾಗವೊಂದರಲ್ಲಿ ಸ್ವತಂತ್ರ ಲೈಂಗಿಕತೆಯನ್ನು ಪಡೆದಿರುವ ಮತ್ತು ಜೀನುಗಳ ಅದಲು ಬದಲು ಮಾಡಿಕೊಳ್ಳಲು ಸಾಧ್ಯವಿರುವ ಪ್ರಾಣಿಗಳ ಗುಂಪು. ಇಂಥ ಗುಂಪಿನಿಂದ ಅನುವಂಶೀಯತೆಯಲ್ಲಿ ವೈವಿಧ್ಯ ಉಂಟಾದಾಗ ಯಾವುದೋ ಒಂದು ಹಂತದಲ್ಲಿ ಪ್ರಜನನ ಪ್ರತ್ಯೇಕತೆಯುಂಟಾಗಿ ಈ ಎರಡು ಗುಂಪುಗಳು ಬೇರೆ ಬೇರೆ ಪ್ರಭೇದಗಳು ಎನಿಸಿಕೊಳ್ಳುತ್ತವೆ ಎಂಬುದು ನವಡಾರ್ವಿನ್‍ವಾದದ ತಿರುಳು. ಪ್ರಭೇದವನ್ನು ಪ್ರಜನನ ಪ್ರತ್ಯೇಕತೆ ಮತ್ತು ನವಡಾರ್ವಿನ್‍ವಾದದ ದೃಷ್ಟಿಯಲ್ಲಿ ಅವಲೋಕಿಸಿದರೆ ಕೆಳಗಿನ ಅಂಶಗಳು ಕಂಡುಬರುತ್ತವೆ. ಪ್ರಭೇದಗಳ ಆವಶ್ಯಕತೆ: ಜೀವಿಗಳು ಬೇರೆ ಬೇರೆ ಆಹಾರವನ್ನು ಸೇವಿಸಿ ವಿವಿಧ ಪರಿಸರಗಳಲ್ಲಿ ಜೀವಿಸಬಲ್ಲವು. ಇಂದು ನಾವು ವೈವಿಧ್ಯಮಯ ಸಸ್ಯಗಳನ್ನು ಪ್ರಾಣಿಗಳನ್ನೂ ಭೂಮಿಯ ಬೇರೆ ಬೇರೆ ಭಾಗಗಳಲ್ಲಿ ಕಾಣುತ್ತಿದ್ದರೂ, ಜೀವ ಒಂದು ನೇರ ವಿಕಾಸದ ಹಾದಿಯಲ್ಲಿಯೇ ಬಂದಿದೆ. ಏಕೆಂದರೆ ಜೀವದ ಉಗಮ ಒಮ್ಮೆ ಮಾತ್ರ ಆಗಿದ್ದು ತದನಂತರ ವಿವಿಧ ಪ್ರಭೇದಗಳು, ಗುಂಪುಗಳು, ಕುಟುಂಬಗಳು, ಉಪವರ್ಗಗಳು, ವರ್ಗಗಳು, ಇತ್ಯಾದಿ ರೂಪುಗೊಂಡವು. ಆದರೆ ವಿಕಾಸ ನಿಧಾನವಾಗಿ ನಡೆಯುತ್ತದೆ. ಜೀವದ ಉಗಮವಾದ ತರುವಾಯದ ಎಲ್ಲ ಪ್ರಭೇದಗಳೂ ಇಂದು ಕಂಡುಬರಬೇಕಿತ್ತು. ಆದರೆ ಈ ವಿಕಾಸದ ಹೆದ್ದಾರಿಯಲ್ಲಿ ಸಾಗಲಾರದೆ ಎಷ್ಟೋ ಪ್ರಭೇದಗಳು ಅಳಿದು ಹೋಗಿ ಪಳೆಯುಳಿಕೆಗಳಾದುವು. ಇವುಗಳಲ್ಲಿ ಕೆಲವೇಕೆಲವು ಇಂದು ಸಿಕ್ಕಿವೆ. ಇನ್ನುಳಿದವು ಅಧ್ಯಯನಕ್ಕೆ ಸಿಗದೇ ಹೋಗಿವೆ. ಹೀಗೆ ಜೀವಪ್ರಪಂಚ ಮೂಲಭೂತವಾಗಿ ವಿಚ್ಛಿನ್ನವಾಗಿದೆ.

ಮಂಡಲನ ಪ್ರತ್ಯೇಕತೆ ಮತ್ತು ಪುನರ್‍ಸಂಯೋಜನೆಗಳು ಅಸಂಖ್ಯಾತ ಜೀನ್ ಸಂಕೀರ್ಣಗಳನ್ನು ನಿರ್ಮಿಸುತ್ತವೆ. ನೈಸರ್ಗಿಕ ಆಯ್ಕೆಯಲ್ಲಿ ಹಲವಾರು ಜೀನ್ ಸಂಕೀರ್ಣಗಳು ಅಚೇತನ ಅಥವಾ ಜಡಚೇತನವಾಗಿದ್ದು ಇಂಥವು ಅಳಿದು ಹೋದವು. ಅಂದರೆ ಈಗ ಇರುವ ಜೀವಿಗಳೆಲ್ಲ ಬದುಕಲು ಸಮರ್ಥ ಅಥವಾ ಯೋಗ್ಯ ಎಂದು ಅರ್ಥವಲ್ಲ. ನೈಸರ್ಗಿಕ ಆಯ್ಕೆ ಪೂರ್ವಯೋಜಿತವಲ್ಲ. ಯಾವ ಜೀನ್ ಮಾದರಿಗಳು ವಿಕಾಸದಲ್ಲಿ ಗೆಲುವನ್ನು ಸಾಧಿಸಿದವೋ ಅವು ವಾಸ್ತವದಲ್ಲಿ ಬದುಕುಳಿಯಲು ಯೋಗ್ಯವಾದವು. ಮುಂದೊಮ್ಮೆ ಇವೂ ಯೋಗ್ಯವಲ್ಲವೆನಿಸಿಕೊಳ್ಳಬಹುದು. ಯೋಗ್ಯವಲ್ಲ ಎಂದರೆ ಯೋಗ್ಯ ಜೀನ್ ಮಾದರಿಗಳನ್ನು ಪರಿಣಾಮಕಾರಿಯಾಗಿ ಪ್ರಜನನ ನಡೆಸಲಾರವು ಎಂದರ್ಥ. ಅಂದರೆ ಭೇದಾತ್ಮಕ ಪ್ರಜನನ ಎಂಬುದು ವಿಕಾಸದ ಬಹು ಮುಖ್ಯ ಅಂಶ ಎಂದು ಹೇಳಬಹುದು. ಭೂಮಿಯ ಮೇಲೆ ಒಂದೇ ರೀತಿಯ ಪರಿಸರವಿದೆ ಎಂದೂ ಜೀವಿಗಳೆಲ್ಲ ಒಂದೇ ರೀತಿಯ ಆಹಾರವನ್ನು ಉಪಯೋಗಿಸಿಕೊಂಡು ಬದುಕಿವೆ ಎಂದೂ ಕಲ್ಪಿಸಿಕೊಂಡರೆ, ಭೂಮಿಯ ಮೇಲೆಲ್ಲ ಒಂದೇ ಒಂದು ಪ್ರಭೇದವಿದ್ದರೂ ಸಾಕಾಗುತ್ತದೆ. ಬಹುಶಃ ಮೊತ್ತ ಮೊದಲು ಜೀವಿ ಉದ್ಭವಿಸಿದಾಗ ಈ ರೀತಿಯ ಪರಿಸರ ಇದ್ದಿರಬೇಕು. ಅನಂತರ ಪರಿಸರ ಬದಲಾಗುತ್ತ ಬಂದಂತೆ ಜೀವಿಗಳು ಹೊಸ ಹೊಸ ಪರಿಸರಗಳಿಗೆ ವಲಸೆ ಹೋಗಲು ಪ್ರಾರಂಭಿಸಿ ಹೊಸ ಪರಿಸರಗಳಿಗೆ ತಕ್ಕ ಜೀನ್‍ಪ್ರರೂಪಗಳನ್ನು ರೂಪಿಸಿಕೊಂಡಿರಬೇಕು.

ಪ್ರಜನನ ಜೀವಿಗಳ ಪ್ರಮುಖ ಲಕ್ಷಣ: ಜೀವಿಗಳು ಅನೇಕವಿಧದಲ್ಲಿ ಪ್ರಜನನವನ್ನು ತೋರುವುವು. ಹೆಚ್ಚಿನಂಶ ಜೀವಿಗಳು ಲೈಂಗಿಕ ರೀತಿಯ ಪ್ರಜನನದಲ್ಲಿ ತೊಡಗಿದರೆ ಇನ್ನು ಕೆಲವು ಜೀವಿಗಳು ನಿರ್ಲಿಂಗರೀತಿಯ ಪ್ರಜನನವನ್ನು ತೋರುವುವು. ಕೆಲವೇ ಕೆಲವು ಪ್ರಾಣಿಗಳಲ್ಲಿ ಅನಿಷೇಚನ ಪ್ರಜನನ ಇದೆಯಾದರೂ ಇಂಥವುಗಳ ಸಂಖ್ಯೆ ಗೌಣ. ಲೈಂಗಿಕ ಪ್ರಜನನದಲ್ಲಿ ಕೂಡ ಅನೇಕ ವಿಧಗಳಿವೆಯಾದರೂ ಲಿಂಗಾಣುಗಳ ಉತ್ಪತ್ತಿ ಮತ್ತು ಅವುಗಳ ಸಂಯೋಗಗಳು ಎಲ್ಲ ವಿಧಗಳಲ್ಲೂ ಒಂದೇ ಆಗಿವೆ. ಪಿತೃವಿನಿಂದ ಮತ್ತು ಮಾತೃವಿನಿಂದ ಸಮವಾಗಿ ಅನುವಂಶೀಯ ವಸ್ತುಗಳು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವುವು. ಪ್ರಭೇದ ಮತ್ತು ಪ್ರಭೇದೋದ್ಭವ ಇವೆರಡೂ ಜೀವಿಗಳ ಪ್ರಜನನ ಶಕ್ತಿಯನ್ನೇ ಅವಲಂಬಿಸಿರುತ್ತವೆ. ಲೈಂಗಿಕ ರೀತಿಯಲ್ಲಿ ಪ್ರಜನನ ನಡೆಸುವ ಜೀವಿಗಳಲ್ಲಿ ವಿಕಾಸ ಹೆಚ್ಚು ಪರಿಣಾಮ ಬೀರುತ್ತದೆ.

ಪ್ರಭೇದ: ಪ್ರಭೇದ ಎಂದರೆ ಸಾಮಾನ್ಯ ಅರ್ಥದಲ್ಲಿ ಜೀವಿಗಳು ಹೊಂದಾಣಿಕೆಗಳನ್ನು ಪಡೆದು ಅವನು ಪೂರ್ತಿಯಾಗಿಯೊ ಸ್ವಲ್ಪವಾಗಿಯೊ ಉಳಿಸಿಕೊಳ್ಳುವು. ಇದು ಒಂದು ಅನಾವಶ್ಯಕ ವ್ಯಾಖ್ಯೆ ಎಂದು ಕೆಲವರ ಅಭಿಪ್ರಾಯ. ಪ್ರಭೇದಕ್ಕೆ ಇನ್ನೊಂದು ವಾಖ್ಯೆ ಎಂದರೆ ಲೈಂಗಿಕ ಪುನರುತ್ಪತ್ತಿ ಮಾಡುವ ಜೀವಿಗಳ ಸಂದಣಿಯಲ್ಲಿ ಇಂತಹ ಇನ್ನೊಂದು ಸಂದಣಿಯೊಂದಿಗೆ ಲೈಂಗಿಕತೆಯಲ್ಲಿ ಅಥವಾ ಪ್ರಜನನದಲ್ಲಿ ಪ್ರತ್ಯೇಕಗೊಳ್ಳುವುದು. ಹೀಗೆ ಪ್ರತ್ಯೇಕತೆಯನ್ನು ತೋರುವ ಸಂದಣಿಗಳೆರಡು ಹೊಸ ಪ್ರಭೇದಗಳೆನಿಸಿಕೊಳ್ಳುತ್ತವೆ. ಪ್ರಭೇದ ಮುಚ್ಚಿದ ಅನುವಂಶಿಕ ವ್ಯೂಹ ಎಂದು ಹೇಳುವುದುಂಟು.

ಒಂದು ಪ್ರಭೇದದಿಂದ ಉದ್ಭವಿಸುವ ಎರಡು ಪ್ರಭೇದಗಳ ಮಧ್ಯೆ ಅಥವಾ ಪ್ರಭೇದವೊಂದರ ವಿವಿಧ ಸಂದಣಿಗಳ ಮಧ್ಯೆ ಲೈಂಗಿಕ ಅಥವಾ ಪ್ರಜನನ ಪ್ರತ್ಯೇಕತೆ ಉಂಟಾಗುವುದಕ್ಕೆ ಹಲವು ಕಾರಣಗಳಿವೆ. ಇವಕ್ಕೆ ಪ್ರತ್ಯೇಕತಾ ಕ್ರಿಯಾವಿನ್ಯಾಸಗಳು ಎಂದು ಹೆಸರು. ಜೀನುಗಳ ಅದಲು ಬದಲಿಗೆ ತಡೆಮಾಡುವ ಯಾವುದೇ ಅನುವಂಶೀಯ ಸ್ಥಿತಿಗೂ ಇದೇ ಹೆಸರುಂಟು. ಈ ಕ್ರಿಯಾವಿನ್ಯಾಸದಲ್ಲಿ ಸಂಭೋಗಪೂರ್ವ ಅಥವಾ ಯುಗ್ಮಪೂರ್ವ ಮತ್ತು ಸಂಭೋಗೋತ್ತರ ಅಥವಾ ಯುಗ್ಮೋತ್ತರ ಎಂಬ ಎರಡು ವಿಧಗಳನ್ನು ಗುರುತಿಸಬಹುದು. ಇವುಗಳಲ್ಲಿ ಸಂಭೋಗಪೂರ್ವ ಪ್ರತ್ಯೇಕತೆ ಸಂಕರಣವನ್ನು ತಡೆಹಿಡಿಯುತ್ತದೆ. ಸಂಭೋಗೋತ್ತರ ಪ್ರತ್ಯೇಕತೆಯಾದರೋ ಫಲವಂತತೆ ಮತ್ತು ಚೇತನಗಳನ್ನು ಕಡಿಮೆ ಮಾಡುತ್ತದೆ. ಆದರೆ ಎರಡೂ ಕ್ರಿಯೆಗಳು ಪರಿಣಾಮವೂ ಒಂದೇ ಆಗಿದ್ದು ಇವು ಎರಡು ಜೀವಿಗಳ ಮಧ್ಯೆ ಜೀನುಗಳ ಅದಲುಬದಲನ್ನು ತಡೆಹಿಡಿಯುತ್ತವೆ. ಕೆಲವು ತೆರನ ಪ್ರತ್ಯೇಕತಾ ಕ್ರಿಯಾವಿನ್ಯಾಸಗಳು ಈ ಮುಂದಿನಂತಿವೆ.

1. ಸಂಭೋಗಪೂರ್ವ ಪ್ರತ್ಯೇಕತೆ: ಪರಿಸರ ಅಥವಾ ನೆಲೆಯ ಪ್ರತ್ಯೇಕತೆ ಯಾವುದೋ ಒಂದು ತೆರನ ಪ್ರಭೇದ ಒಂದು ಭೂಭಾಗದ ಎರಡು ಅಥವಾ ಹೆಚ್ಚು ನೆಲೆಗಳಲ್ಲಿ ವಾಸಿಸುವಿಕೆಯ ಪರಿಣಾಮ. ನೆಲೆಗಳ ಪ್ರತ್ಯೇಕತೆ ಸ್ವಸಂಬಂಧಿ ಜೀವಿಗಳಲ್ಲಿ ಪ್ರಜನನ ಪ್ರತ್ಯೇಕತೆಯನ್ನು ಉಂಟುಮಾಡುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಉದಾಹರಣೆಗೆ, ಅನಾಫಿಲೀಸ್ ಸೊಳ್ಳೆ ಕಂಡುಬರುವ ಎಲ್ಲ ಸ್ಥಳಗಳಲ್ಲೂ ಮಲೇರಿಯ ಇರಬೇಕು ಎಂದಿಲ್ಲ. ಏಕೆಂದರೆ ಮಲೇರಿಯ ಅನಾಫಿಲೀಸ್‍ನ ಕೆಲವು ಪ್ರಭೇದಗಳಿಂದ ಮಾತ್ರ ಪ್ರಸಾರವಾಗಬಲ್ಲದು. ಯೂರೋಪ್ ಮತ್ತು ಪಶ್ಚಿಮ ಏಷ್ಯದಲ್ಲಿ ಹೊರನೋಟಕ್ಕೆ ಒಂದೇ ರೀತಿಯಾಗಿ ಕಂಡರೂ ವಾಸ್ತವವಾಗಿ ವಿಭಿನ್ನವಾಗಿರುವ ಆರು ಪ್ರಭೇದಗಳನ್ನು ಪತ್ತೆಹಚ್ಚಲಾಯಿತು. ಈ ಪ್ರಭೇದಗಳು ತಮ್ಮ ಕ್ರೋಮೊಸೋಮ್ ಸಂಖ್ಯೆಯಲ್ಲಿ, ಜೀನ್ ಸರಣಿಯಲ್ಲಿ, ಪ್ರಣಯಾಚರಣೆಯ ರೀತಿಯಲ್ಲಿ ಮತ್ತು ಬಹುಮುಖ್ಯವಾಗಿ ತಮ್ಮ ನೆಲೆಯಲ್ಲಿ ಪರಸ್ಪರ ಬೇರೆಯಾಗಿರುವುದು ಕಂಡುಬಂತು. ಇವುಗಳ ಪೈಕಿ ಕೆಲವು ಮಾತ್ರ ಮಲೇರಿಯವನ್ನು ಹರಡುತ್ತವೆ ಎಂಬುದನ್ನೂ ಸಿದ್ಧಪಡಿಸಲಾಯಿತು.  1930ಕ್ಕಿಂತ ಮೊದಲು ಒಂದೇ ಪ್ರಭೇದವೆಂದು ಭಾವಿಸಲಾಗಿದ್ದ ಅನಾಫಿಲೀಸ್ ಆರು ಪ್ರಭೇದಗಳ ಒಂದು ಗುಂಪು ಎಂದು ತಿಳಿಯಿತು. ಹೀಗೆ ನೆಲೆಯ ಪ್ರತ್ಯೇಕತೆಯಿಂದ ಹಿಂದೆ ಒಂದೇ ಆಗಿದ್ದ ಪ್ರಭೇದ ಕಾಲಾನುಕ್ರಮದಲ್ಲಿ ಆರು ಪ್ರಭೇದಗಳ ಗುಂಪಾಗಿ ಪರಿವರ್ತನೆಯಾಗಿರಬೇಕು. ಇಂಥ ಉದಾಹರಣೆಗಳು ಸಸ್ಯಪ್ರಪಂಚದಲ್ಲೂ ಉಂಟು.

2. ಶ್ರಾಯಿಕ ಅಥವಾ ಐಹಿಕ ಪ್ರತ್ಯೇಕತೆ: ಇದು ಸಸ್ಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಪ್ರಭೇದಗಳು ಬೇರೆ ಬೇರೆ ಕಾಲಗಳಲ್ಲಿ ಫಲ ಧರಿಸುತ್ತವೆ. ಶ್ರಾಯಿಕ ಪ್ರತ್ಯೇಕತೆಗೆ ಪೈನಸ್ ರೇಡಿಯೇಟ ಮತ್ತು ಪೈನಸ್ ಮ್ಯೂರಿಕೇಟ ಉತ್ತಮ ಉದಾಹರಣೆಗಳು. ಇವೆರಡು ಪ್ರಭೇದಗಳೂ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಒಟ್ಟಿಗೇ ಬೆಳೆಯುತ್ತವಾದರೂ ಪೈನಸ್ ರೇಡಿಯೇಟ ಪ್ರಭೇದ ಫೆಬ್ರುವರಿಯಲ್ಲೂ ಪೈನಸ್ ಮ್ಯೂರಿಕೇಟ ಏಪ್ರಿಲ್ ತಿಂಗಳಲ್ಲೂ ಪರಾಗವನ್ನು ಉತ್ಪಾದಿಸುತ್ತವೆ. ಇವು ಬೇರೆ ಬೇರೆ ಕಾಲದಲ್ಲಿ ಫಲ ಬಿಡುವುದರಿಂದ ಈ ಎರಡೂ ಪ್ರಭೇದಗಳಲ್ಲಿ ಜೀನ್ ಅದಲು ಬದಲು ಆಗದು. ಸಂಕರಗಳೆಂದು ಹೇಳಲಾಗುವ ಕೆಲವು ಅಂತರವರ್ತಿಗಳು ಇದ್ದು ಇವು ಎರಡು ಪ್ರಭೇದಗಳ ಮಿಶ್ರಗುಣಗಳನ್ನು ಪಡೆದಿವೆಯಾದರೂ ಇವುಗಳ ಸಂಖ್ಯೆ ಬಲು ಕಡಿಮೆ. ಅಲ್ಲದೆ ಈ ಸಂಕರಗಳು ಚೇತನಹೀನವಾಗಿದ್ದು ಹೆಚ್ಚು ಉತ್ಪಾದನಾಶೀಲವಾಗಿಲ್ಲ.

3. ಲೈಂಗಿಕ ಅಥವಾ ಶೀಲಸ್ವಭಾವ ಪ್ರತ್ಯೇಕತೆ: ಎರಡು ಪ್ರಭೇದಗಳ ಅಥವಾ ಒಂದೇ ಪ್ರಭೇದದ ಎರಡು ಗುಂಪುಗಳ ಹೆಣ್ಣು ಗಂಡುಗಳ ಮಧ್ಯೆ ಲೈಂಗಿಕ ಆಕರ್ಷಣೆ ಇಲ್ಲವಾಗುವುದು ಅಥವಾ ಕಡಿಮೆಯಾಗುವುದು. ಲೈಂಗಿಕ ಪ್ರತ್ಯೇಕತೆ ಸಾಂಗತ್ಯ ಪ್ರಭೇದಗಳನ್ನು ಬೇರ್ಪಡಿಸುವ ಪ್ರಬಲ ಕಾರಕ. ಹೆಣ್ಣುಗಂಡುಗಳು ಜೊತೆಗೂಡಿ ಸಂಕೀರ್ಣ ಪ್ರಣಯಾಚರಣೆ ಮತ್ತು ಸಂಭೋಗ ನಡೆದು ಅಂಡಾಣು ವೀರ್ಯಾಣುಗಳ ಸಂಯೋಗವಾಗಿ ಸಂತಾನ ವೃದ್ಧಿಯಾಗಬೇಕು. ಈ ಹಂತಗಳಲ್ಲಿ ಎಲ್ಲಿಯಾದರೂ ವ್ಯತ್ಯಾಸವಾದರೆ ಅದು ಪ್ರತ್ಯೇಕತೆಯಾಗುತ್ತದೆ. ಲೈಂಗಿಕ ಪ್ರತ್ಯೇಕತೆ ಹೆಣ್ಣು ಮತ್ತು ಗಂಡುಗಳ ಸಂಭೋಗಕ್ಕೆ ತಡೆ ಹಾಕುತ್ತದೆ. ಲೈಂಗಿಕ ಪ್ರತ್ಯೇಕತೆಯನ್ನು ಡ್ರೊಸಾಫಿಲ ನೊಣಗಳಲ್ಲಿ ಸುಲಭವಾಗಿ ಕಾಣಬಹುದು. ಎರಡು ಪ್ರಭೇದದ ಹೆಣ್ಣುಗಳ ಜೊತೆ ಯಾವುದಾದರೂ ಒಂದು ಪ್ರಭೇದದ ಗಂಡುಗಳನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಕೂಡಿಸಿ ಒಂದೆರಡು ದಿನ ಬಿಟ್ಟು ಅನಂತರ ಹೆಣ್ಣುಗಳ ವೀರ್ಯಾಣು ಸಂಪುಟಗಳನ್ನು ಛೇದಿಸಿ ನೋಡಿದಲ್ಲಿ ಅದರಲ್ಲಿ ವೀರ್ಯಾಣುಗಳಿಲ್ಲದಿದ್ದರೆ ಪ್ರತ್ಯೇಕತೆ ಇದೆಯೆಂದೂ ವೀರ್ಯಾಣುಗಳಿದ್ದರೆ ಪ್ರತ್ಯೇಕತೆ ಇಲ್ಲವೆಂದೂ ತೀರ್ಮಾನಿಸಬಹುದು. ಇದೇ ಪ್ರಕಾರ ಪ್ರಯೋಗವೊಂದರಲ್ಲಿ ಡ್ರೊಸಾಫಿಲ ಪರ್‍ಸಿಮಿಲಿಸ್ ಮತ್ತು ಡ್ರೊಸಾಫಿಲ ಸೂಡೊಅಬ್ಸೂ ್ಕ್ಯರ ಪ್ರಭೇದಗಳ ಹೆಣ್ಣುಗಳನ್ನು ಡ್ರೊಸಾಫಿಲ ಪರ್‍ಸಿಮಿಲಿಸ್‍ಗಳೊಂದಿಗೆ ಕೂಡಿಸಿದಾಗ ಡ್ರೊಸಾಫಿಲ ಪರ್‍ಸಿಮಿಲಿಸ್ ಪ್ರಭೇದದ 178 ಹೆಣ್ಣುಗಳಲ್ಲಿ 79.2% ರಷ್ಟು, ಡ್ರೊಸಾಫಿಲ ಸೂಡೊಅಬ್ಸ್ಕ್ಯೂರದ 173 ಹೆಣ್ಣುಗಳಲ್ಲಿ 22.5%ರಷ್ಟು ಹೆಣ್ಣುಗಳೂ ಸಂಭೋಗಕ್ಕೊಳಗಾಗಿದ್ದವು. ಅಂದರೆ ಈ ಎರಡೂ ಪ್ರಭೇದಗಳ ಮಧ್ಯೆ ಲೈಂಗಿಕ ಪ್ರತ್ಯೇಕತೆಯಿದ್ದು ಒಂದು ಪ್ರಭೇದದ ಗಂಡು ಯಾವಾಗಲೂ ಅದೇ ಪ್ರಭೇದದ ಹೆಣ್ಣನ್ನು ಮೆಚ್ಚುತ್ತದೆ ಎಂದಾಯಿತು. ಆಯ್ಕೆ ರಹಿತ ಸ್ಥಿತಿಯಲ್ಲಿ ಅಂದರೆ ಒಂದು ಪ್ರಭೇದದ ಹೆಣ್ಣನ್ನು ಇನ್ನೊಂದು ಪ್ರಭೇದದ ಗಂಡಿನೊಂದಿಗೆ ಕೂಡಿಸಿದಾಗ ಹೆಚ್ಚು ಹೆಣ್ಣುಗಳು ಸಂಭೋಗವಾಗುವ ಸಾಧ್ಯತೆ ಇದೆ.

4. ಯಾಂತ್ರಿಕ ಪ್ರತ್ಯೇಕತೆ: ಸಸ್ಯಗಳಲ್ಲಿ ಪರಾಗಸ್ಪರ್ಶದ ತಡೆಯಿಂದ ಮತ್ತು ಪ್ರಾಣಿಗಳಲ್ಲಿ ಜನನಾಂಗಗಳ ವ್ಯತ್ಯಾಸದಿಂದ ಉಂಟಾಗುವ ಲೈಂಗಿಕ ತಡೆ. ಪ್ರಾಣಿಗಳಲ್ಲಿ ಸಂಭೋಗವಾಗುವಾಗ ಹೆಣ್ಣು ಗಂಡುಗಳ ಜನನಾಂಗಗಳು ಒಂದಕ್ಕೊಂದು ಸಂಪೂರ್ಣ ಕೂಡಿಕೊಳ್ಳುತ್ತವೆ. ಕೆಲವೇ ಕೆಲವು ಪ್ರಾಣಿಗಳಲ್ಲಿ ಮಾತ್ರ ಜನನಾಂಗಗಳ ಆಕಾರ, ಗಾತ್ರಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾದರೂ ಲೈಂಗಿಕ ಸಂಪರ್ಕ ನಡೆಯುತ್ತದೆ. ಇಂಥ ಪ್ರಭೇದಗಳು ಅತಿ ಹತ್ತಿರದ ಸಂಬಂಧಿಗಳಾಗಿರಬೇಕು. ಇಲ್ಲವಾದರೆ ಲೈಂಗಿಕ ಸಂಪರ್ಕ ಅಸಾಧ್ಯ. ಲಿಂಗವ್ಯತ್ಯಾಸದಿಂದ ಪ್ರಜನನ ಪ್ರತ್ಯೇಕತೆಯಾಗುವುದಕ್ಕೆ ಅನೇಕ ಉದಾಹರಣೆಗಳಿವೆ. ಚಿರತೆ ಮತ್ತು ಹುಲಿಗಳು ಒಂದೇ ಗುಂಪಿಗೆ ಸೇರುವ ಪ್ರಾಣಿಗಳಾದರೂ ಇವುಗಳಲ್ಲಿ ಲೈಂಗಿಕ ಸಂಪರ್ಕ ಅಸಾಧ್ಯ.

ಸಸ್ಯಗಳಲ್ಲಿ ಪರಾಗಸ್ಪರ್ಶಮಾಡುವ ವಿಧಾನ ಬೇರೆಯಾದಾಗ, ಅಥವಾ ಒಂದೇ ಪ್ರಭೇದದ ಸಸ್ಯಗುಂಪುಗಳು ಬೇರೆ ಬೇರೆ ವಿಧಾನಗಳಿಂದ ಪರಾಗಸ್ಪರ್ಶಹೊಂದುವಂತೆ ಮಾರ್ಪಾಡಾದಾಗ ಪ್ರಜನನ ಪ್ರತ್ಯೇಕತೆ ಉಂಟಾಗುತ್ತದೆ. ಈ ಕ್ರಿಯೆಯಲ್ಲಿ ಹೂವಿನ ಹಾಗೂ ಕೀಟಗಳ ಮಾರ್ಪಾಡೂ ಮುಖ್ಯ.

5. ಲಿಂಗಾಣು ಪ್ರತ್ಯೇಕತೆ: ವೀರ್ಯಾಣು ಮತ್ತು ಅಂಡಾಣುಗಳಲ್ಲಿ ಪರಸ್ಪರ ಆಕರ್ಷಣೆಯಿಲ್ಲದಿರುವಿಕೆ ಅಥವಾ ವೀರ್ಯಾಣು ಇಲ್ಲವೆ ಪರಾಗ ಸ್ತ್ರೀ ಲಿಂಗನಾಳಗಳಲ್ಲಿ ನಶಿಸಿಹೋಗುವುದು. ಇದು ಜಲವಾಸಿ ಸಸ್ಯ ಮತ್ತು ಪ್ರಾಣಿಗಳಲ್ಲಿ ಹೆಚ್ಚು ಮುಖ್ಯ. ಏಕೆಂದರೆ ಇಲ್ಲಿ ಲಿಂಗಾಣುಗಳು ನೀರಿನಲ್ಲಿ ಸ್ವತಂತ್ರವಾಗಿ ಬಿಡುಗಡೆಯಾಗುವುವು. ಒಂದೇ ಪ್ರಭೇದದ ಲಿಂಗಾಣುಗಳ (ಅಂಡಾಣು ಮತ್ತು ವೀರ್ಯಾಣು) ಮಧ್ಯೆ ಆಕರ್ಷಣೆ ಇದೆಯಾಗಿ ಅವು ಒಂದುಗೂಡಲು ಸಾಧ್ಯವಾಗುತ್ತದೆ. ಪ್ರಭೇದಗಳ ಮಧ್ಯೆ ಈ ಆಕರ್ಷಣೆ ಕಡಿಮೆಯಾದರೆ ಪ್ರಭೇದಗಳ ಪ್ರತ್ಯೇಕತೆ ಅಥವಾ ಲಿಂಗಾಣು ಪ್ರತ್ಯೇಕತೆ ಕಾಣಬರುತ್ತದೆ.

ಭೂಚರಿಗಳಲ್ಲಿ ಸಂಭೋಕ್ರಿಯೆಯ ತರುವಾಯ ಸ್ತ್ರೀಲಿಂಗನಾಳದಲ್ಲಿ ವೀರ್ಯಾಣು ಚಲಿಸಿ ಅಂಡಾಣುವನ್ನು ತಲುಪುತ್ತದೆ ಹೀಗೆ ಚಲಿಸುತ್ತಿರುವ ವೀರ್ಯಾಣು ಹೆಣ್ಣಿನ ಜನನಾಂಗದಲ್ಲಿ ಧಾರಣೆಯಾಗುತ್ತದೆ ಈ ಧಾರಣಾಶಕ್ತಿ ಇಲ್ಲವಾದಾಗ ಪ್ರಭೇದಗಳ ಮಧ್ಯೆ ಲಿಂಗಾಣು ಪ್ರತ್ಯೇಕತೆ ಉಂಟಾಗುತ್ತದೆ.

6. ಭೌಗೋಳಿಕ ಪ್ರತ್ಯೇಕತೆ: ಇದರಲ್ಲಿ ಎರಡು ವಿಧ. ಸಮುದ್ರ, ಬೆಟ್ಟಗುಡ್ಡ, ಪರ್ವತಗಳು ಪ್ರಜನನಕ್ಕೆ ತಡೆಯೊಡ್ಡಬಹುದು. ಏಕೆಂದರೆ ಕೆಲವು ಪ್ರಾಣಿಗಳು ಅಥವಾ ಸಸ್ಯಗಳು ನೆಲೆತಪ್ಪಿದಾಗ ಬದುಕಲಾರವು. ಅದರಿಂದ ಒಂದು ನೆಲೆಗೂ ಇನ್ನೊಂದು ನೆಲೆಗೂ ಮಧ್ಯೆ ತಡೆಯಿರುವಾಗ ಇಂಥ ಪ್ರಾಣಿಗಳು ಚಲಿಸಲಾರವು. ಮಧ್ಯೆ ತಡೆಯಿರುವಾಗ ಒಂದೇ ಪ್ರಭೇದದ ಎರಡು ಸಂದಣಿಗಳ ನಡುವೆ ಲೈಂಗಿಕ ಕ್ರಿಯೆ ಸಾಧ್ಯವಾಗುವುದಿಲ್ಲ. ಇಂಥವಕ್ಕೆ ಅಸಾಂಗತ್ಯ ಪ್ರಭೇದಗಳು ಎಂದು ಹೆಸರು.

ಹೊರನೋಟಕ್ಕೆ ಒಂದೇ ತೆರನಾಗಿರುವ ಆದರೆ ಅನುವಂಶೀಯತೆಯಲ್ಲಿ ಬೇರೆಯಾಗಿರುವ ಎರಡು ಪ್ರಭೇದಗಳು ಒಂದೇ ಭೂಭಾಗದಲ್ಲಿ ವಾಸಿಸುತ್ತಿದ್ದರೂ ಅವುಗಳಲ್ಲಿ ಲೈಂಗಿಕ ಕ್ರಿಯೆಯಾಗಲೀ ಜೀನುಗಳ ಅದಲುಬದಲಾಗಲೀ ನಡೆಯುವುದಿಲ್ಲ. ಇಂಥ ಪ್ರಭೇದಗಳನ್ನು ಸಾಂಗತ್ಯ ಪ್ರಭೇದಗಳು ಎನ್ನುತ್ತಾರೆ.

II ಸಂಭೋಗೋತ್ತರ ಪ್ರತ್ಯೇಕತೆ: 1 ಸಂಕರಗಳ ಅಚೇತನ: ಸಂಕರಗಳು ಲೈಂಗಿಕ ಪರಿಪಕ್ವತೆಗೆ ಬರುವ ಮುಂಚೆಯೇ ವಿಸರ್ಜನೆಯಾಗುವಿಕೆ. ಈ ವಿಸರ್ಜನೆ ನಿಷೇಚನಗೊಂಡ ಯುಗ್ಮಜ ಪಕ್ವತೆಗೆ ಬರುವ ಮೊದಲು ಯಾವ ಹಂತದಲ್ಲಾದರೂ ನಡೆಯಬಹುದು. ಚಿರತೆ ಕಪ್ಪೆಗಳ ಪ್ರಭೇದವಾದ ರಾನ ಪಿಪಿಯನ್ಸ್ ಮತ್ತು ಅದಕ್ಕೆ ಹತ್ತಿರದ ಪ್ರಭೇದಗಳಲ್ಲಿ ಲೈಂಗಿಕ ಕ್ರಿಯೆ ನಡೆದು ಸಂಕರಗಳು ಉದ್ಭವಿಸುತ್ತವೆ. ಆದರೆ ಈ ಸಂಕರಗಳು ಪಕ್ವವಾಗುವ ಮೊದಲೇ ಯಾವುದೋ ಹಂತದಲ್ಲಿ ಸಾಯುತ್ತವೆ.
2 ಸಂಕರಗಳ ಬಂಜೆತನ: ಸಂಕರಗಳಲ್ಲಿ ಲಿಂಗಾಣುಗಳು ಉತ್ಪತ್ತಿಯಾಗದೇ ಇರುವುದು. ಕುದುರೆ ಮತ್ತು ಕತ್ತೆಗಳ ಸಂಕರಗಳು ಎಂದು ಹೇಳಲಾಗುವ ಹೇಸರಗತ್ತೆಗಳು (ಮ್ಯೂಲ್ಸ್) ಬಂಜೆಪ್ರಾಣಿಗಳು. ಇವು ಸಂತಾನವೃದ್ಧಿಯನ್ನು ಮಾಡಲಾರವು. ಕೆಲವು ಪ್ರಭೇದಗಳ ಸಂಕರಗಳಲ್ಲಿ ಸಂಪೂರ್ಣ ಬಂಜೆತನ ಇದೆಯಾದರೆ ಇನ್ನುಳಿದವುಗಳಲ್ಲಿ ಅಪೂರ್ಣ ಬಂಜೆತನ ಇದ್ದು ಹೆಣ್ಣು ಅಥವಾ ಗಂಡು ಮಾತ್ರ ಲಿಂಗಾಣುಗಳನ್ನು ಉತ್ಪಾದಿಸಲಾರವು ಅಥವಾ ಲಿಂಗಾಣುಗಳು ಅಸಮಸಂಖ್ಯೆಯ ಕ್ರೋಮೊಸೋಮುಗಳನ್ನು ಪಡೆದಿದ್ದು ಅವು ಕ್ರಿಯಾಹೀನವಾಗಿರುವುವು.

3 ಸಂಕರಗಳ ಕುಸಿತ: ಮೊದಲನೆಯ ಅಥವಾ ಎರಡನೆಯ ಪೀಳಿಗೆಗಳಲ್ಲಿ ಸಂಕರಗಳು ಕುಸಿತಗೊಳ್ಳುತ್ತವೆ. ಅಂದರೆ ಸಂಕರಗಳು ಫಲವಂತವಾಗಿದ್ದರೂ ಮೊದಲನೆಯ ಅಥವಾ ಎರಡನೆಯ ಪೀಳಿಗೆಗಳನ್ನು ಹಿಂಸಂಕರಣಗೊಳಿಸಿದಾಗ ಅವುಗಳ ಸಂತತಿಯಲ್ಲಿ ಬಂಜೆತನ ಕಂಡುಬರುತ್ತದೆ.

ಒಂದು ಸಂಕರದಲ್ಲಿ ಜೀನ್‍ಗಳ ಅದಲಿಗೆ ಬದಲು ಎಲ್ಲಾ ಪ್ರತ್ಯೇಕತಾ ಕ್ರಿಯಾವಿನ್ಯಾಸಗಳೂ ಸೇರಿ ತಡೆಯುಂಟು ಮಾಡುವುದಿಲ್ಲ, ಒಂದು ಅಥವಾ ಎರಡು ವಿಧಗಳು ಮಾತ್ರ ಒಮ್ಮೆಗೆ ಕೆಲಸ ಮಾಡುತ್ತವೆ. ಪ್ರತ್ಯೇಕತಾ ಕ್ರಿಯಾ ವಿನ್ಯಾಸಗಳು ವಿಭಿನ್ನವಾದರೂ ವಿಕಾಸದ ದೃಷ್ಟಿಯಲ್ಲಿ ಅವುಗಳ ಪರಿಣಾಮ ಒಂದೇ. ಅಂದರೆ ಜೀನ್‍ಗಳ ಅದಲು ಬದಲಿಗೆ ತಡೆಹಾಕಿ ಒಂದು ಪ್ರಭೇದವನ್ನು ಇನ್ನೊಂದರಿಂದ ಬೇರ್ಪಡಿಸುವುದು.

ವಿಕಾಸ ಯಾದೃಚ್ಚಿಕ: ನಿರ್ದಿಷ್ಟ ಗುರಿಯೆಂಬುದು ಅದಕ್ಕಿಲ್ಲ, ಕೃತಕವಾಗಿ ಎರಡು ಪ್ರಭೇದಗಳ ಸಂಕರಗಳನ್ನು ಪಡೆಯುವುದು ಆಶ್ಚರ್ಯಕರವಲ್ಲ. ಆದರೆ ನಿಸರ್ಗದಲ್ಲಿ ಇಂಥ ಸಂಕರಗಳು ಅತಿ ಕಡಿಮೆ. ಇಲ್ಲವೇ ಇಲ್ಲವೆಂದರೂ ತಪ್ಪಾಗದು. ಇಷ್ಟಾದರೂ ಕೆಲವು ಸಂದರ್ಭಗಳಲ್ಲಿ ನೈಸರ್ಗಿಕ ಸಂಕರಗಳು ಉತ್ಕøಷ್ಟತೆಯನ್ನು ಪಡೆದಿದ್ದು ಲಾಭದಾಯಕವಾಗಿವೆ. ಒಂದೇ ಪ್ರಭೇದದ ವಿವಿಧ ಜೀನ್‍ಪ್ರರೂಪಗಳ ಸಂಕರಗಳು ವಿಕಾಸದ ದೃಷ್ಟಿಯಲ್ಲಿ ಉತ್ಕøಷ್ಟವಿರಬಹುದು. ಇವು ವಿಕಾಸಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತವೆ.

ಪ್ರಜನನ ಪ್ರತ್ಯೇಕತೆಯ ಉದ್ಭವ ಮತ್ತು ಬೆಳೆವಣಿಗೆಯ ಬಗ್ಗೆ ಎರಡು ವಾದಗಳಿವೆ. ಒಂದು ವಾದದ ಪ್ರಕಾರ ಇದು ಅನುವಂಶೀಯ ಅಪಸರಣದ ಉಪೋತ್ಪತ್ತಿ. ಪ್ರತಿಸಂದಣಿ ಅನುವಂಶೀಯವಾಗಿ ಹೆಚ್ಚು ಹೆಚ್ಚು ಅಸಮತೆಯನ್ನು ಪಡೆದಿರುತ್ತದೆ. ಈ ಅಸಮತೆ ಗಣನೀಯವಾದಾಗ ಅವು ಪ್ರಭೇದಗಳಾಗಿ ಬೇರ್ಪಟ್ಟು ಪ್ರಜನನ ಪ್ರತ್ಯೇಕತೆಯನ್ನು ಪ್ರದರ್ಶಿಸುವುವು. ಇನ್ನೊಂದು ವಾದದ ಪ್ರಕಾರ ಪ್ರಜನನ ಪ್ರತ್ಯೇಕತೆ ನೈಸರ್ಗಿಕ ಆಯ್ಕೆಯಿಂದ ಉಂಟಾದ್ದು. ನೈಸರ್ಗಿಕ ಆಯ್ಕೆಯ ಪ್ರಕಾರ ಯಾವ ಪ್ರಭೇದ ಅಥವಾ ಗುಂಪು ಹೆಚ್ಚು ಸಂತಾನವನ್ನು ಪಡೆಯುವುದೋ ಅದು ಬದುಕಲು ಯೋಗ್ಯವಾದ್ದು. ಎರಡು ಪ್ರಭೇದಗಳ ಸಂಕರಗಳು ಯೋಗ್ಯವಿಹೀನವಾಗಿದ್ದು ಅವು ತಮ್ಮ ಪಿತೃಗಳಷ್ಟು ಪರಿಣಾಮಕಾರಿಯಾಗಿ ಸಾಕಷ್ಟು ಸಂಖ್ಯೆಯಲ್ಲಿ ಸಂತಾನ ವೃದ್ಧಿ ಮಾಡಲಾರವು. ಅಂದರೆ ಸಂಕರಗಳಿಗಿಂತ ಶುದ್ಧತಳಿಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಹೀಗಾಗಿ ಪಿತೃಪ್ರಭೇದಗಳ ಸಂತಾನ ಸಂಕರಗಳ ಸಂತಾನಗಳಿಗಿಂತ ಹೆಚ್ಚಾಗುತ್ತ ಹೋಗುತ್ತವೆ. ಪಿತೃ ಪ್ರಭೇದಗಳು ತಮ್ಮ ಪ್ರಭೇದಗಳೊಂದಿಗೆ ಕೂಡುವ ಸಂಭವ ಹೆಚ್ಚಾಗುತ್ತ ಹೋಗುತ್ತದೆ. ಹಾಗೆಯೇ ಸಂಕರಗಳ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತದೆ.

ಈ ಎರಡು ವಾದಗಳಲ್ಲಿ ಯಾವುದು ತಥ್ಯ ಎಂದು ಹೇಳುವುದು ಕಠಿಣ. ಆದರ ಪ್ರಭೇದೋದ್ಭವ, ಪ್ರಜನನ ಪ್ರತ್ಯೇಕತೆ ಮತ್ತು ಜೀನ್‍ಗಳ ಅದಲುಬದಲು-ಇವು ಒಂದಕ್ಕೊಂದು ಜೊತೆಗೊಂಡಿದ್ದು ಪ್ರಭೇದೋದ್ಭವದಲ್ಲಿ ಕೊನೆಯ ಎರಡು ಕಾರಕಗಳು ಬಹುಮುಖ್ಯ ಪಾತ್ರವಹಿಸುತ್ತವೆ.
(ಎಸ್.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ